ಪೆಟ್ರಾರ್ಕ್, ಪ್ರಾನ್ಸೆಸ್ಕೊ 
1304-1374. ಇಟಲಿಯ ಪ್ರಖ್ಯಾತ ಕವಿ. ಮಾನವತಾವಾದದ ಪ್ರವರ್ತಕ. ಆಧುನಿಕ ಭಾವಗೀತೆಗಳ ಪ್ರಥಮ ಹಾಗೂ ಶ್ರೇಷ್ಠ ಕವಿ.

1304ರ ಜುಲೈ 20ರಂದು ಅರೆಜೊ ಎಂಬಲ್ಲಿ ಹುಟ್ಟಿದ. ತಂದೆ ಸೆರ್‍ಪಿಯೋ ಟೊ ಡಿ ಸೆರೆ ಪರೆಂಜೊ (ಸೆರ್ ಪೆಟ್ರಾಕ್ಕೊ) ಸಾರ್ವಜಿನಿಕ ಕರಾರು ಪತ್ರಗಳನ್ನು ಪ್ರಮಾಣೀಕರಿಸುವ ಅಧಿಕಾರಿ. ತಾಯಿ ಎಲೆಟ್ಟಾಕ್ಯಾನಿ ಗಿಯಾನಿ. ಪೆಟ್ರಾರ್ಕ್ ಎಂಬುದು ಮನೆತನದ ಹೆಸರು. ಈ ಕುಟುಂಬ ಫ್ಲಾರೆನ್ಸ್‍ನ್ನು ಬಿಟ್ಟು ಅವಿಗ್ನಾನ್‍ನಲ್ಲಿ ನೆಲೆಸಿದಾಗ ಅಲ್ಲಿನ ಸ್ವರ್ಗಸದೃಶವಾದ ನಿಸರ್ಗ ಸೌಂದರ್ಯ ಫ್ರಾನ್ಸೆಸ್ಕೊನ ಅರಳಲಿದ್ದ ಕವಿ ಹೃದಯದ ಮೇಲೆ ಅಗಾಧ ಪ್ರಭಾವವನ್ನು ಬೀರಿತು. ಕಾನ್ವಿನೆವೋಲ್ ಡಾ ಪ್ರ್ಯಾಟೊ ಎಂಬವರ ಬಳಿ ಆರಂಭವಾದ ಈತನ ವಿದ್ಯಾಭ್ಯಾಸ ಮಾಂಟ್‍ತೆಲ್ಲಿಯರ್ ಮತ್ತು ಬೋಲೋನಾದ ಕಾಲೇಜಿನಲ್ಲಿ ಮುಂದುವರಿಯಿತು. ತನಗಿಷ್ಟವಿಲ್ಲದಿದ್ದರೂ ತಂದೆಯ ಬಲವಂತಕ್ಕಾಗಿ ಲಾ ಕಾಲೇಜು ಸೇರಿದ. ಈತನಿಗೆ ಆಸಕ್ತಿ ಇದ್ದುದು ಸಾಹಿತ್ಯ ಮತ್ತು ಪ್ರಾಚ್ಯ ವಿಷಯಗಳ ಮೇಲೆ. ಆಗಲೆ ಕವಿತೆಗಳನ್ನೂರಚಿಸತೊಡಗಿದ್ದ. ಕಾನೂನು ಗ್ರಂಥಗಳಿಗಿಂತ ವರ್ಜಿಲ್, ಸಿಸಿರೊ, ಸೆನೆಕಾ ಹೆಚ್ಚು ಆಕರ್ಷಿಸಿದರು. ಗ್ರೀಕ್ ಕ್ಲಾಸಿಕ್ಸ್‍ನ ಜ್ಞಾನವನ್ನು ಸಾಕಷ್ಟು ಸಂಪಾದಿಸಿದ. ಸಾಹಿತ್ಯ, ಕಲೆ, ತತ್ವಶಾಸ್ತ್ರಗಳ ಗ್ರಂಥಗಳು ಹೊಸದೊಂದು ಲೋಕವನ್ನೇ ತೆರೆದವು. 1326ರಲ್ಲಿ ತಂದೆ ತೀರಿಹೋದಾಗ ವಿದ್ಯಾಭ್ಯಾಸವನ್ನು ನಿಲ್ಲಿಸಿ ಅವಿಗ್ನಾನ್ ಚರ್ಚಿನಲ್ಲಿ ಸಣ್ಣದೊಂದು ಕೆಲಸಕ್ಕೆ ಸೇರಿದ. 1327ರಲ್ಲಿ ಲಾರಾ (ಫ್ರೆಂಚ್ ಶ್ರೀಮಂತ ಕೆಂಟ್ ಹ್ಯೂಗೊ ಡಿ ಸಾಡೆಯ ಪತ್ನಿ ಎಂದು ಊಹಿಸಲಾಗಿದೆ) ಎಂಬ ಯುವತಿಯನ್ನು ಕಂಡು ಪ್ರೇಮವಶನಾದ. ಆಕೆ ಈತನ ಕನಸಿನ ರಾಣಿ, ಕಾವ್ಯದ ಸ್ಫೂರ್ತಿ ಆದಳು. ಆಕೆಗಾಗಲೇ ಮದುವೆ ಆಗಿದ್ದುದರಿಂದ ಭಗ್ನಪ್ರೇಮಿಯಾದ ಕವಿ ಕೋಪ, ನಿರಾಶೆಗಳನ್ನು ಅಭಿವ್ಯಕ್ತಿಸುವ ಪ್ರೇಮಗೀತೆಗಳನ್ನೇ ಮೊದಲು ಬರೆದರೂ ತನ್ನ ಅನುರಾಗವನ್ನು ಪರಿಶುದ್ಧವಾದ ಆದರ್ಶಪ್ರೇಮವಾಗಿ ತಿರುಗಿಸಿ ಅನೇಕ ಅಮೂಲ್ಯವಾದ ಅಮರವಾದ ಪ್ರೇಮಗೀತೆಗಳನ್ನು ಬರೆದ. ಅವುಗಳ ಸೂಕ್ಷ್ಮ, ಕೋಮಲ ಭಾವನೆಗಳು, ನಾದ ಮಾಧುರ್ಯ ಅಸದೃಶವಾಗಿದೆ. ಪ್ರಾವೆನ್ಸ್‍ವಲ್ಲಿದ್ದಾಗ ಕವಿ ಟ್ರೊಬೆಡೊರ್ಸ್ (ಚಾರಣ ಗಾಯಕರು) ತೌರಾದ ಆ ಸ್ಥಳದಲ್ಲಿ ತಾನೂ ಚಾರಣ ಕವಿಗಾಯಕನಾಗಿ ಸೊಗಸಾದ ಹಾಡುಗಳನ್ನುರಚಿಸಿದ. ನಾನಾ ಛಂದೋಪ್ರಯೋಗಗಳನ್ನು ಮಾಡುತ್ತ ತನ್ನದೇ ಆದ ಸಾನೆಟ್‍ರೂಪವನ್ನು ನಿರ್ಮಾಣ ಮಾಡಿದ. ಹಲವಾರು ಮಾದರಿಯ ಕವನಗಳನ್ನು ಲ್ಯಾಟಿನ್‍ನಲ್ಲಿ ಅಲ್ಲದೆ ದೇಶೀ ಭಾಷೆಯ ಬಳಕೆಯ ಮಾತಿನಲ್ಲೇ ಬರೆದು ಆಧುನಿಕ ಕವನಗಳ ಮೊದಲಿಗನಾದ. ಪ್ರಭಾವಶಾಲಿ ಕವಿಯಾಗಿ ಬೆಳೆದ. ಈತನ ಲೆ ರೈಮ್ (1327) ಆ ಕಾಲದ ಎಲ್ಲರನ್ನು ಸಮ್ಮೋಹಗೊಳಿಸಿತು. ಈತನ ಭಾಷೆಯ ಸೊಗಸು, ನಾದಮಾಧುರ್ಯ ಅಪ್ರತಿಮವಾಗಿವೆ.

ಪೆಟ್ರಾರ್ಕ್‍ನಿಗೆ ಪ್ರಾಚೀನ ಸಂಸ್ಕøತಿಯಲ್ಲಿ ಅತೀವ ಅಭಿಮಾನ. ಕ್ರೈಸ್ತ ಸಂದೇಶದಲ್ಲೂ ಅಪಾರ ಶ್ರದ್ಧೆ. ಇವೆರಡೂ (ಅನೇಕ ಮಡಿವಂತ ಕ್ರೈಸ್ತರೂ ಆಧುನಿಕ ವಿಚಾರವಂತರೂ ತಿಳಿದಂತೆ) ಪರಸ್ಪರ ವಿರೋಧವಲ್ಲ; ಒಂದೇ ಅಖಂಡ ಪರಂಪರೆಯ ವಿಕಸಿತ ಹಂತಗಳು; ಕ್ಲಾಸಿಕಲ್ ಸಂಸ್ಕøತಿ ಭರವಸೆ ಆದರೆ ಕ್ರೈಸ್ತ ಧರ್ಮ ಅದರ ಈಡೇರಿಕೆ ಎಂಬುದು ಪೆಟ್ರಾರ್ಕ್‍ನ ಜೀವನ ಸಿದ್ಧಾಂತ. ತನ್ನ ಗ್ರಂಥಗಳಲ್ಲಿ, ಅದರಲ್ಲೂ ಡಿ ವೈರಿಸ್ ಮತ್ತು ಆಫ್ರಿಕದಲ್ಲಿ ಇದನ್ನೇ ಪ್ರತಿಪಾದಿಸಿದ್ದಾನೆ.

	ಈತನಿಗೆ ಪ್ರಾಚೀನ ಗ್ರೀಕ್ ಮತ್ತು ಲ್ಯಾಟಿನ್ ಗ್ರಂಥಗಳ (ಕ್ಲಾಸಿಕ್ಸ್) ಹಸ್ತಪ್ರತಿಗಳನ್ನೂ ಪ್ರಾಚೀನ ಕಾಲದ ನಾಣ್ಯ, ಶಾಸನ, ತಾಮ್ರಪಟ ಕಲಾಕೃತಿಗಳನ್ನೂ ಸಂಗ್ರಹಿಸುವ ಗೀಳು ಎಂಬಂಥ ಹವ್ಯಾಸವಿತ್ತು. ಈ ಸಂಗ್ರಹ ಕಾರ್ಯಕ್ಕೆ ಯುವಕರನ್ನೂ ಪ್ರೋತ್ಸಾಹಿಸುತ್ತಿದ್ದ. ಕೇಳಿದಷ್ಟು ಹಣ ಕೊಟ್ಟು ಇಂತಹ ಅಪೂರ್ವ ವಸ್ತುಗಳನ್ನು ಕೊಳ್ಳುತ್ತಿದ್ದ. 1333ರಲ್ಲಿ ಫ್ರಾನ್ಸ್, ಫ್ಲಾಂಡರ್ಸ, ಬ್ರೆಬಾಂಟ್, ರ್ಹೈನ್‍ಲ್ಯಾಂಡ್‍ಗಳಲ್ಲಿ ಇವನ್ನು ಹುಡುಕಿಕೊಂಡು ಅಲೆದಾಡಿದ. ಕಳೆದೋ ಹಾಳಾಗಿಯೋ ಹೋಗಬಹುದಾಗಿದ್ದ ಇಂತಹ ಹಲವು ಅಮೂಲ್ಯ ಗ್ರಂಥಗಳ ಮತ್ತು ವಸ್ತುಗಳ ಸಂರಕ್ಷಣೆಯ ಶ್ರೇಯಸ್ಸು ಪೆಟ್ರಾರ್ಕ್‍ನಿಗೆ ಸಲ್ಲುತ್ತದೆ. ಈತನಿಗಿದ್ದ ಇನ್ನೊಂದು ಹವ್ಯಾಸ ಪತ್ರಲೇಖನ. ಬಂಧುಮಿತ್ರರಿಗೆ, ದೊರೆಗಳಿಗೆ, ಧಾರ್ಮಿಕ ಗುರುಗಳಿಗೆ ಪರಿಚಿತ-ಅಪರಿಚಿತ ಗಣ್ಯರಿಗೆ ಮಾತ್ರವಲ್ಲ ಹೋಮರ್, ವರ್ಜಿಲ್, ಸಿಸಿರೊ, ಲಿಪಿ ಮುಂತಾದ ಪ್ರಾಚೀನ ಕಾಲದ ಮಹನೀಯರಿಗೂ ಸಮಕಾಲೀನ ಸ್ನೇಹಿತರೆಂಬಂತೆ ಪತ್ರಗಳನ್ನು ಬರೆದು ಇಡುತ್ತಿದ್ದ. ಹಾಗೆಯೇ ಇನ್ನೂ ಹುಟ್ಟದ ಭವಿಷ್ಯತ್ಕಾಲದ ಮಕ್ಕಳಿಗೂ ಬರೆಯುವ ವಿಚಿತ್ರ ಹವ್ಯಾಸ ಇವನದಾಗಿತ್ತು.

ಪೆಟ್ರಾರ್ಕ್‍ನ ಪ್ರಣಯದ ಸಹಜ ಸಂಜಾತರಾಗಿ 1333ರಲ್ಲಿ ಗಿಯೊವನ್ನಿ ಎಂಬ ಮಗನೂ 1343ರಲ್ಲಿ ಫ್ರಾನ್ಸಿಸ್ಕಾ ಎಂಬ ಮಗಳೂ ಹುಟ್ಟಿದರು. ಮುಂದೆ ಇವರನ್ನು ಸಮಾಜ ಧಾರ್ಮಿಕವಾಗಿ ಸ್ವೀಕರಿಸಿತು.

	ಬೋಲೋನಾದಲ್ಲಿ ಗಿಯಾಕೋಮೊ ಕೊಲೋನ್ನಾ ಎಂಬಾತನ ಸ್ನೇಹವಾದುದು, ಕವಿಯ ಜೀವನದಲ್ಲಿ ಒಂದು ಮಹತ್ತರ ಸಂಗತಿ. ಗಿಯಾಕೋಮೊ ಮಾತ್ರವಲ್ಲ ಆತನ ಅಣ್ಣ ಕಾರ್ಡಿನಲ್ ಗಿಯೊವನ್ನಿ. ಮುಂದೆ ಮಗ ಫ್ರಾನ್ಸಿಸ್ಕಾ ಡಾ ಕ್ಯಾರರ, ಹೀಗೆ ಇಡೀ ಕುಟುಂಬ ಆಪ್ತಬಂಧುಗಳಂತೆ ಕವಿಗೆ ಪ್ರೀತಿ, ಧೈರ್ಯ, ಬೆಂಬಲ, ಜೀವನ ಸೌಕರ್ಯಗಳನ್ನು ಕೊಟ್ಟರು. ಕವಿ ತನ್ನ ಕೊನೆಗಾಲವನ್ನು ಕಳೆದ ಆಕ್ರ್ವಾದ ಕುಟೀರ ಈ ಕುಟುಂಬದ ಕೊಡುಗೆ. ಪೆಟ್ರಾರ್ಕ್‍ನ ಜೀವನದಲ್ಲಿ ಸುಖ-ಸೌಕರ್ಯಗಳಿಗೆ ಎಂದೂ ಕೊರತೆಯಾಗಿರಲಿಲ್ಲ. ಮಿತ್ರರ, ಅಭಿಮಾನಿಗಳ, ಶ್ರೀಮಂತರ, ರಾಯಭಾರಗಳಿಗೆ ಕರೆಯುತ್ತಿದ್ದ ದೊರೆಗಳ ಮತ್ತು ಮಠಾಧಿಪತಿಗಳ ಪ್ರೋತ್ಸಾಹ, ಮನ್ನಣೆ ಉದ್ದಕ್ಕೂ ದೊರೆತವು. ಅಧ್ಯಯನ, ಸಾಹಿತ್ಯರಚನೆ, ಧ್ಯಾನ, ಚಿಂತನ ರಾಯಭಾರಗಳಲ್ಲೇ ಇಡೀ ಜೀವನ ಕಳೆಯಿತು. ಚಿಕ್ಕಂದಿನಿಂದಲೂ ಧರ್ಮಶ್ರದ್ಧೆ, ದೈವಭಕ್ತಿ ಬೆರೆತ ಆಧ್ಯಾತ್ಮಿಕ ತುಡಿತವಿತ್ತು. ಜೀವನದ ನಶ್ವರತೆಯ ಅರಿವು ದುಃಖಾನುಭವಗಳಿಂದ ಸ್ಥಿರಗೊಳ್ಳುತ್ತ ಕವಿಯನ್ನು ಚಿಂತನಶೀಲನನ್ನಾಗಿ ಮಾಡಿದವು. ಭೋಗಜೀವನದ ಆಕರ್ಷಣೆಗೂ ಆಧ್ಯಾತ್ಮದೊಲವಿಗೂ ನಿರಂತರ ಘರ್ಷಣೆಯಾಗುತ್ತ ಈ ಒಳತೋಟಿಯಲ್ಲಿ ಕವಿ ಜೀವನದುದ್ದಕ್ಕೂ ಒದ್ದಾಡಿದ. ಅವಿಗ್ನಾನ್‍ಗೆ 24 ಕಿ. ಮೀ. ದೂರದ ವ್ಯಾಕ್ಲೂಸ್ ಎಂಬ ಒಂದು ಪ್ರಶಾಂತವಾದ ಏಕಾಂತ ಸ್ಥಳದಲ್ಲಿ ಕುಟೀರವನ್ನು ಕೊಂಡು ಆಗಾಗ ಆಶ್ರಮವಾಸಿಯಂತೆ ಅಲ್ಲಿ ಇರುತ್ತಿದ್ದ. ಆಗ ಅಲ್ಲಿ ಯಥೇಚ್ಛವಾಗಿ ಧ್ಯಾನ, ಚಿಂತನೆ, ಸಾಹಿತ್ಯರಚನೆಗಳು ನಡೆಯುತ್ತಿದ್ದವು.

1341ರಲ್ಲಿ ರೋಮ್‍ನಲ್ಲಿ ಕವಿಗೆ ವೈಭವೋಪೇತವಾದ ಸನ್ಮಾನ ದೊರೆಯಿತು. ಕವಿ ಸಾಮ್ರಾಟನೆಂದು ಶ್ರೇಷ್ಠಕವಿ ಪ್ರಶಸ್ತಿಯ ಲತಾಕಿರೀಟವನ್ನು ತಲೆಯ ಮೇಲಿರಿಸಿ ಜನತೆ ಗೌರವಿಸಿತು. ಸಾವಿರ ವರ್ಷಗಳಾದ ಮೇಲೆ ಕಾವ್ಯಕ್ಕೆ ದೊರೆತ ಪ್ರಥಮ ಮನ್ನಣೆ ಅದು. ಕವಿ ಅತ್ಯಂತ ವಿನಯದಿಂದ ತನ್ನ ಲತಾಕಿರೀಟವನ್ನು ಸಂತ ಪೀಟರ್ ಸಮಾಧಿಯ ಮೇಲೆ ಇರಿಸಿದ.

	1345ರ ಅನಂತರ ರಾಯಭಾರಿಯಾಗಿ ಅನೇಕ ರಾಜರ ಆಸ್ಥಾನಗಳಿಗೆ, ಧಾರ್ಮಿಕ ಮಠಗಳಿಗೆ ಹೋಗಿ ಬರಬೇಕಾಯಿತು. 1348ರಲ್ಲಿ ಪೆಡುವಾದ ಕೆತೆಡ್ರಲ್‍ನ ಮುಖ್ಯವಾಗಿ (ಆರ್ಚ್ ಡಿಯಾಕನ್) ನೇಮಿತನಾದ. ಫ್ಲಾರೆನ್ಸ್‍ನಲ್ಲಿ ಪರಿಚಯವಾದ ಖ್ಯಾತ ಸಾಹಿತಿ ಬೊಕ್ಯಾಶಿಯೊ ಕವಿಯ ಪರಮ ಮಿತ್ರನಾದ. ಆತ ಪೆಟ್ರಾರ್ಕ್‍ನ ಜೀವನ ಧ್ಯೇಯವನ್ನು ಎಚ್ಚರಿಸಿದ. 1348ರಲ್ಲಿ ಬಂದ ಪ್ಲೇಗಿನಲ್ಲಿ ಲಾರಾ ಮತ್ತು ಅನೇಕ ಆಪ್ತಮಿತ್ರರು ಸತ್ತು, 1350ರಲ್ಲಿ ಆಪ್ತಮಿತ್ರ ಗಿಯಾಕೋಮೊ ಕೊಲೆಯಾಗಿ ಕವಿಯಲ್ಲಿ ಜೀವನದ ನಶ್ವರತೆಯ ಅರಿವು ಗಾಢವಾಯಿತು. ವ್ಯಾಕ್ಲೂಸಿನ ಶಾಂತಿಧಾಮಕ್ಕೆ ಓಡಿಹೋದ. ಕಾವ್ಯರಚನೆಯ ಸಮೃದ್ಧ ಕಾಲವಾಯಿತು, ಅಲ್ಲಿನ ವಾಸ 1362 ರಿಂದ 1368ರವರೆಗೆ ವೆನಿಸ್‍ನಲ್ಲಿದ್ದುದು ಅತ್ಯಂತ ಸುಖಮಯವಾದ ಕಾಲ. ಮಗಳು ಮೊಮ್ಮಗಳು ಇವನನ್ನು ಕೂಡಿಕೊಂಡರು. ಕೌಟುಂಬಿಕ ನೆಮ್ಮದಿ, ಸುಖ, ಇಷ್ಟಮಿತ್ರರ ಭೇಟಿ ಎಲ್ಲ ದೊರೆತವು. ವೆನಿಸ್ ತುಂಬಾ ಪ್ರಿಯವಾಯಿತು. ಸ್ವಾತಂತ್ರ್ಯ, ನ್ಯಾಯ, ಧರ್ಮ ಶಾಂತಿಗಳ ನೆಲವೀಡು ಅದು ಎಂದು ಕವಿ ಮೆಚ್ಚಿ ತನ್ನೆಲ್ಲ ಕೃತಿಗಳನ್ನೂ ಅಲ್ಲಿನ ಪೌರಸಮಿತಿಗೆ ಕೊಡುವುದಾಗಿ ವಚನವಿತ್ತ. ಅಲ್ಲಿನ ನಗರ ಸಮಿತಿಯ ಪ್ರಮುಖ ಸಲಹೆಗಾರನಾದ.

1368 ರಿಂದ 1374ರವರೆಗೆ ಪೆಡುವಾದ ಹತ್ತಿರ ಯೂಜಿನಿಯನ್ ಗಿರಿಗಳ ಆಕ್ರ್ವಾ ಎಂಬ ಸ್ಥಳದಲ್ಲಿ ಒಂದು ಏಕಾಂತಕುಟೀರದಲ್ಲಿ ಕೊನೆಗಾಲವನ್ನು ಕಳೆದ. 1370ರಲ್ಲಿ ರೋಮ್‍ಗೆ ಹೋಗುತ್ತ ದಾರಿಯಲ್ಲಿ ಪಾಶ್ರ್ವವಾಯುಪೀಡಿತನಾಗಿ ಮಲಗಿದ. ಚೇತರಿಸಿಕೊಳ್ಳುವಾಗಲೂ ಸಾಹಿತ್ಯದ ಕೆಲಸ ನಡೆದೇ ಇತ್ತು. ಡಿ ಗೆಸ್ಟಿಸ್ ಸೀಸರಿಸ್ ಎಂಬ ವಿಡಂಬನೆಯೇ ಈತನ ಕೊನೆಯರಚನೆ. 1374ರ ಜುಲೈ 8ರಂದು ತನ್ನ ಅಧ್ಯಯನ ಕೊಠಡಿಯಲ್ಲಿ ತನಗೆ ತುಂಬಾ ಪ್ರಿಯವಾಗಿದ್ದ ವರ್ಜಿಲ್ ಎಂಬ ಹಸ್ತಪ್ರತಿಯ ಮೇಲೆ ತಲೆಯಿರಿಸಿಕೊಂಡು ಹಾಗೆಯೆ ಪ್ರಾಣಬಿಟ್ಟ.
ಶ್ರೇಷ್ಠಕವಿಯಾಗಿ, ನೀತಿಜ್ಞನಾಗಿ, ನವಸಂಸ್ಕøತಿಯ ಪ್ರಮುಖ ಪ್ರತಿನಿಧಿಯಾಗಿ ಪೆಟ್ರಾರ್ಕ್ ಚಿರಸ್ಮರಣೀಯನಾಗಿದ್ದಾನೆ. ಆತ ಅಸಾಧಾರಣ ವ್ಯಕ್ತಿ. ಇಟಲಿಯ ನವೋದಯದ (ರಿನೇಸಾನ್ಸ್‍ನ) ಜನಕ. ರೆನಾನ್ ಆತನನ್ನು ಆಧುನಿಕರಲ್ಲಿ ಮೊದಲಿಗನೆಂದು ಕರೆದಿದ್ದಾನೆ. ಈತನ ಕೃತಿಗಳು : ಎಪಿಸಲ್ಸ್ (1326-74), ಲೇ ರೈಮ್ (1327), ಆಫ್ರಿಕ (1338-42), ಇಟ್ರಿಯೋನ್‍ಫಿ (ಗೆಲುವುಗಳು) (1352-74), ದಿ ವಿರಿಬಸ್ ಇಲ್‍ಸ್ಟ್ರಿಬಸ್ (ಮಹಾಪುರುಷರ ಜೀವನ1338), ಸೀಕ್ರೆಟಮ್ (ಅಂತರಂಗ) (1343), ದಿ ವಿಟಾ ಸಾಲಿಟೇರಿಯಾ (ಏಕಾಂತ ಜೀವನ ಕುರಿತು), (1346-56), ದಿ ಒಟಿಯಾ ರಿಲಿಜಿಯಾ ಸೋರಮ್ (ಚಿಂತಾ ಮುಕ್ತಿಕಾರಕ ಧರ್ಮ ಕುರಿತು) (1347-56), ದಿ ರೆಮೆಡೀಸ್ ಉಟ್ರಿಯಸ್ಕ್ ಫಾರ್ಚುನೆ (ಭಾಗ್ಯ ದೌರ್ಭಾಗ್ಯಗಳ ಪರಿಹಾರ ಕುರಿತು (1350-74), ಫೆಮಿಲಿಯಾರಿ (ಲೇಖನಗಳ ಸಂಕಲನ 1350), ಮೆಟಿಖೆ (ಲೇಖನಗಳ ಸಂಕಲನ 1350), ಇನ್ವೆಕ್ಯಿವಾ, ಇಟಿನೆರೇರಿಯಮ್, ದಿ ಗೆಸ್ಟಿಸ್ ಸೀಸರಿಸ್.						 (ಕೆ.ಬಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ